ಬನವಾಸಿ
ಬನವಾಸಿಯು, ಉತ್ತರ
ಕನ್ನಡ ಜಿಲ್ಲೆಯ
ಶಿರ್ಸಿ ಪಟ್ಟಣದ
ಆಗ್ನೇಯ ದಿಕ್ಕಿನಲ್ಲಿ
ಸುಮಾರು ಇಪ್ಪತ್ತೆರಡು
ಕಿಲೋಮೀಟರುಗಳ ದೂರದಲ್ಲಿರುವ
ಚಿಕ್ಕ ಊರು. ಈ ಇದು
ಕರ್ನಾಟಕದ ಅತ್ಯಂತ
ಪ್ರಾಚೀನವೂ ಪ್ರಸಿದ್ಧವೂ
ಆದ ಸ್ಥಳಗಳಲ್ಲಿ
ಒಂದು. ಇದು ಇತಿಹಾಸ,
ಪುರಾಣ ಮತ್ತು ವಾಸ್ತುಶಿಲ್ಪಗಳೆಂಬ
ಮೂರು ನೆಲೆಗಳಲ್ಲಿಯೂ
ಮುಖ್ಯವಾಗಿದೆ. ಬನವಾಸಿ
ಮತ್ತು ಅದರ ಸುತ್ತಲಿನ
ಪ್ರದೇಶದ ಪ್ರಕೃತಿಸೌಂದರ್ಯವನ್ನು
ಕುರಿತ ಉಲ್ಲೇಖಗಳು
ಪಂಪ, ಚಾಮರಸ ಮುಂತಾದ
ಕವಿಗಳ ಬರವಣಿಗೆಯಲ್ಲಿ
ದೊರಕುತ್ತವೆ.
ಬನವಾಸಿ ಎನ್ನುವ
ಪದದ ಮೂಲ ವನವಾಸ
ಎನ್ನುವುದು. ಪುರಾಣಗಳ
ಪ್ರಕಾರ ಈ ಊರಿನ
ಸುತ್ತಮುತ್ತಲ ಕಾಡುಗಳಲ್ಲಿ
ಮಧು ಮತ್ತು ಕೈಟಭರೆಂಬ
ಇಬ್ಬರು ರಾಕ್ಷಸರು
ವಾಸವಾಗಿದ್ದರು.
ಇವರನ್ನು ಮಹಾವಿಷ್ಣುವು
ಸಂಹಾರ ಮಾಡಿದನು.
ಈ ರಾಕ್ಷಸರಲ್ಲಿ
ಹಿರಿಯನಾದ ಮಧು ಬನವಾಸಿಯಲ್ಲಿರುವ
ಮಧುಕೇಶ್ವರ ದೇವಾಲಯವನ್ನು
ಕಟ್ಟಿಸಿದನೆಂದು
ಪ್ರತೀತಿ. ಪಾಂಡವರು
ತಮ್ಮ ವನವಾಸದ ಒಂದು
ಭಾಗವನ್ನು ಈ ಕಾಡುಗಳಲ್ಲಿ
ಕಳೆದರೆಂಬ ಐತಿಹ್ಯವೂ
ಪ್ರಚಲಿತವಾಗಿದೆ.
ಕ್ರಿಸ್ತಶಕದ
ಪ್ರಾರಂಭದಿಂದಲೂ
ಇತಿಹಾಸಕಾರರು ಬನವಾಸಿಯನ್ನು
ಗಮನಿಸಿ, ಅದರ ಬಗ್ಗೆ
ದಾಖಲಿಸಿದ್ದಾರೆ.
ಬೌದ್ಧರ ಇತಿಹಾಸದ
ಪ್ರಕಾರ ಅಶೋಕನು
ಕಳಿಸಿದ ಸಂದೇಶವಾಹಕರಲ್ಲಿ
ಒಬ್ಬನಾದ ಬನವಾಸಿಗೆ
ಭೇಟಿ ನೀಡಿದ್ದನು.
ಬೌದ್ಧಧರ್ಮದ ಪ್ರಚಾರಕರು
ಕಾಲದಿಂದ ಕಾಲಕ್ಕೆ
ಈ ಊರಿಗೆ ಬರುತ್ತಿದ್ದರು.
ಶಾತವಾಹನರಿಂದ
ಮೊದಲು ಮಾಡಿಕೊಂಡು
ಅನೇಕ ರಾಜವಂಶಗಳು
ಬನವಾಸಿಯನ್ನು ಆಳಿವೆ.
ನಾಲ್ಕು ಮತ್ತು ಆರನೆಯ
ಶತಮಾನಗಳ ನಡುವಿನ
ಅವಧಿಯಲ್ಲಿ ಬನವಾಸಿಯು
ಕದಂಬವಂಶವನ್ನು
ಸ್ಥಾಪಿಸಿದ ಮಯೂರವರ್ಮನ
ಹಾಗೂ ಅವನ ನಂತರದ
ಅರಸುಗಳ ರಾಜಧಾನಿಯಾಗಿತ್ತು.
ಅನಂತರ ಬಾದಾಮಿ ಮತ್ತು
ಕಲ್ಯಾಣಿ ಚಾಳುಕ್ಯ
ವಂಶಗಳ ರಾಜರು ಇಲ್ಲಿ
ಆಳ್ವಿಕೆ ನಡೆಸಿದರು.
ಹನ್ನೆರಡನೆಯ ಶತಮಾನದ
ಕೊನೆಯ ವೇಳೆಗೆ ಹೊಯ್ಸಳ,
ಸೇವುಣ ಮತ್ತು ಕಳಚೂರ್ಯ
ವಂಶಗಳಿಗೆ ಸೇರಿದ
ರಾಜರು ಬನವಾಸಿಯ
ಮೇಲೆ ಸತತವಾದ ಆಕ್ರಮಣಗಳನ್ನು
ನಡೆಸುತ್ತಿದ್ದರು.
ಆಮೇಲೆ ಬನವಾಸಿ ಮಂಡಲವು
ವಿಜಯನಗರ ಸಾಮ್ರಾಜ್ಯದ
ಭಾಗವಾಯಿತು. ಬನವಾಸಿಯಲ್ಲಿರುವ
ಅನೇಕ ದೇವಾಲಯಗಳ
ಸ್ಥಾಪನೆ ಮತ್ತು
ನಿರ್ವಹಣೆಗೆ ಬೀಳಗಿ
ಹಾಗೂ ಸ್ವಾದಿ ವಂಶಗಳ
ಅರಸರು ಹೇರಳವಾದ
ಕಾಣಿಕೆ ನೀಡಿದ್ದಾರೆ.
ಬನವಾಸಿಯ ವಾಸ್ತುಶಿಲ್ಪ
ಮತ್ತು ಶಿಲ್ಪಕಲೆಗಳ
ಸಂಕ್ಷಿಪ್ತವಾದ
ಪರಿಚಯವು ಕೋಟೆಯ
ಮಧ್ಯದಲ್ಲಿರುವ
ಮಧುಕೇಶ್ವರ ದೇವಾಲಯದಿಂದಲೇ
ಪ್ರಾರಂಭವಾಗಬೇಕು.
ವಾಸ್ತವವಾಗಿ, ಇದು
ಹಲವು ವಾಸ್ತುಶೈಲಿಗಳ
ಸಂಗಮ. ಇಲ್ಲಿರುವ
ಮೂಲ ಶಿವಲಿಂಗವನ್ನು
ಎಂಟನೆಯ ಶತಮಾನದಲ್ಲಿ
ಪ್ರತಿಷ್ಠಾಪಿಸಲಾಯಿತು.
ಗರ್ಭಗುಡಿ ಮತ್ತು
ಸುಕನಾಸಿಗಳು ಪಟ್ಟದಕಲ್ಲಿನ
ಬಾದಾಮಿ ಚಾಳುಕ್ಯರ
ಶೈಲಿಯನ್ನು ಅನುಸರಿಸಿವೆ.
ಸುಕನಾಸಿಯ ಮುಂದೆ
ಇರುವ ಮಂಟಪ ಹಾಗೂ
ಅಲ್ಲಿರುವ ಕಂಬಗಳು
ಕಲ್ಯಾಣಿ ಚಾಳುಕ್ಯರ
ಶೈಲಿಯ ಅನುಕರಣೆ.
ದೇವಾಲಯದ ಚಾವಣಿಯು
ಮಧ್ಯದಲ್ಲಿ ಸಮತಲವಾಗಿದ್ದು
ನಾಲ್ಕೂ ದಿಕ್ಕುಗಳಲ್ಲಿ
ಇಳಿಜಾರಾಗಿದೆ. ವಿಜಯನಗರದ
ದೊರೆಯಾದ ಮೊದಲನೆಯ
ಹರಿಹರನು ಹಲವು ಕಾಲದ
ನಂತರ ಈ ಮಂಟಪವನ್ನು
ಜೀರ್ಣೋದ್ಧಾರ ಮಾಡಿರುವಂತೆ
ಕಾಣುತ್ತದೆ. ಮಧುಕೇಶ್ವರ
ದೇವಸ್ಥಾನದ ಪ್ರಾಂಗಣದಲ್ಲಿಯೇ
ಹದಿನೈದನೆಯ ಶತಮಾನದ
ಸದಾಶಿವ ಮತ್ತು ಪಾರ್ವತಿಯರ
ಚಿಕ್ಕ ಗುಡಿಗಳಿವೆ.
ಸೋದೆ ಮನೆತನದ ರಾಜರು
ದಾನ ಮಾಡಿರುವ ಅತ್ಯಂತ
ಸುಂದರವಾದ ವಿಗ್ರಹಗಳ
ಸಮೂಹ ಹಾಗೂ ಬೃಹದಾಕಾರದ
ರಥಗಳು ಬನವಾಸಿಯ
ಆಕರ್ಷಣೆಯನ್ನು
ಹೆಚ್ಚಿಸಿವೆ.
ಈ ಚಿಕ್ಕ ಹಳ್ಳಿಯಲ್ಲಿ
ಜೈನರ ಮತ್ತು ವೀರಶೈವರ
ಅನೇಕ ದೇವಾಲಯಗಳಿವೆ.
ಎಂಟನೆಯ ತೀರ್ಥಂಕರನಾದ
ಚಂದ್ರಪ್ರಭನ ವಿಗ್ರಹವನ್ನು
ಹೊಂದಿರುವ ಬಸದಿಯನ್ನು
ಹತ್ತರಿಂದ ಹನ್ನೆರಡನೆಯ
ಶತಮಾನಗಳ ಅವಧಿಯಲ್ಲಿ
ನಿರ್ಮಿಸಲಾಗಿದೆ.
ಅಲ್ಲಮಪ್ರಭು ಮತ್ತು
ಬಸವೇಶ್ವರರ ದೇವಾಲಯಗಳು
ಹಾಗೂ ಐದು ವೀರಶೈವ
ಮಠಗಳು ಬನವಾಸಿಗೆ
ಇನ್ನೊಂದು ಆಯಾಮವನ್ನು
ನೀಡಿವೆ. ಬನವಾಸಿ
ದೇಶದ ಚೆಲುವನ್ನು
ಕನ್ನಡದ ಆದಿಕವಿಯಾದ
ಪಂಪನು ಮರೆಯಲಾಗದಷ್ಟು
ಸುಂದರವಾದ ಸಾಲುಗಳಲ್ಲಿ
ಹೇಳಿದ್ದಾನೆ. ಯಾರಾದರೂ
ಅಂಕುಶದಿಂದ ತಿವಿದಾಗಲೂ
ತನ್ನ ಮನಸ್ಸು ಬನವಾಸಿ
ದೇಶವನ್ನೇ ನೆನೆಯವುದೆಂದು
ಅವನ ಉದ್ಗಾರ.
ಮುಂದಿನ ಓದು
ಮತ್ತು ಲಿಂಕುಗಳು:
1.
Narasimhamurthy A.V.(Et al): Banavasi Excvavations,
D.A.M.,
2.
Banavasi
- Wikipedia, the free encyclopedia
3. Kamat's Potpourri: Ancient City of Banavasi
4. www.flickr.com/photos/jahnavi_pai/1042331784/