ಚಂದ್ರವಳ್ಳಿ

          ಚಂದ್ರವಳ್ಳಿಯು, ಮಧ್ಯಕರ್ನಾಟಕದಲ್ಲಿರುವ ಚಿತ್ರದುರ್ಗ ಜಿಲ್ಲೆಯಲ್ಲಿದೆ. ಚಿತ್ರದುರ್ಗದಿಂದ ಸುಮಾರು ನಾಲ್ಕು ಮೈಲಿಗಳ ದೂರದಲ್ಲಿರುವ ಈ ಸ್ಥಳವು ಇಂಡಿಯಾದ ಪ್ರಮುಖ ಉತ್ಖನನ ಕೇಂದ್ರಗಳಲ್ಲಿ ಒಂದು. ಚಂದ್ರವಳ್ಳಿಯು, ಮಾನವನ ಇತಿಹಾಸದ ಅನೇಕ ಪ್ರಮುಖ ಘಟ್ಟಗಳನ್ನು ಹಾದುಬಂದಿದೆ. ಇಲ್ಲಿ ನಡೆದಿರುವ ಉತ್ಖನನಗಳಲ್ಲಿ ಸಿಕ್ಕಿರುವ ಸಾಮಗ್ರಿಗಳು, ಹತ್ತು ಹಲವು ಹೊಸ ಸಂಶೋಧನೆಗಳಿಗೆ ಎಡೆ ಮಾಡಿಕೊಟ್ಟಿವೆ.

          ಚಂದ್ರವಳ್ಳಿಯನ್ನು ಈ ಮೊದಲು ಚಂದನವತಿಯೆಂದೂ ಕರೆಯುತ್ತಿದ್ದರು. ಪುರಾಣಗಳ ಪ್ರಕಾರ ಇದು ಕುಂತಳ ರಾಜನಾದ ಚಂದ್ರಹಾಸನು ಆಳುತ್ತಿದ್ದ ಜಾಗ. ಬೇರೆ ಕೆಲವರು, ಈ ಪ್ರದೇಶವು ಚಂದ್ರನ ಆಕೃತಿಯಲ್ಲಿ ಇದ್ದುದರಿಂದ ಈ ಹೆಸರು ಬಂದಿತೆಂದು ಹೇಳುತ್ತಾರೆ.

            ಚಂದ್ರವಳ್ಳಿಯ ಉತ್ಖನನ ಕಾರ್ಯವು 1909 ರಲ್ಲಿಯೇ ಮೊದಲಾಯಿತು. ಬಿ.ಎಲ್. ರೈಸ್, ಆರ್. ನರಸಿಂಹಾಚಾರ್ ಮತ್ತು ಆರ್ . ಶಾಮಾಶಾಸ್ತ್ರಿಯವರಂತಹ ಹಿರಿಯ ಪುರಾತತ್ವಶಾಸ್ತ್ರಜ್ಞರು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. 1929-30 ರಲ್ಲಿ ಎಂ.ಎಚ್. ಕೃಷ್ಣ ಅವರು ಮಾಡಿದ ಸಂಶೋಧನೆಗಳು ಮಹತ್ವಪೂರ್ಣವಾದವು. ಭಾರತ ಸರಕಾರದ ಪುರಾತತ್ವ ಇಲಾಖೆಯ ನಿರ್ದೇಶಕರಾಗಿದ್ದ ಮಾರ್ಟಿಮರ್ ವೀಲರ್ ಅವರು, 1947 ರಲ್ಲಿ ಈ ಕೆಲಸಗಳಿಗೆ ಅಂತಿಮ ಆಕಾರವನ್ನು ಕೊಟ್ಟರು.

          ಚಂದ್ರವಳ್ಳಿಯಲ್ಲಿ ಉತ್ಖನನ ಮಾಡಿರುವ ಸ್ಥಳವು, 750 ಮೀಟರ್ ಉದ್ದ ಮತ್ತು 700 ಮೀಟರ್ ಅಗಲವುಳ್ಳ ಆಯತಾಕಾರ. ವಾಸ್ತವದಲ್ಲಿ, ಇದು ಮನೆಗಳ ಸಮುಚ್ಚಯ. ಇಟ್ಟಿಗೆಯ ಗೋಡೆಗಳು, ಮೇಲ್ಭಾಗದಲ್ಲಿ ಮುಚ್ಚಿರುವ ಚರಂಡಿಗಳು, ಕೆಂಪು ಜಲ್ಲಿ ಕಲ್ಲುಗಳನ್ನು ಅಡಕಗೊಳಿಸಿರುವ ನೆಲ ಮತ್ತು ಒಲೆಗಳನ್ನು ಈಗಲೂ ಇಲ್ಲಿ ನೋಡಬಹುದು. ಬೇರೊಂದು ಕಾಲಘಟ್ಟದಲ್ಲಿ, ಇದು ಸಮಾಧಿಸ್ಥಳವೂ ಆಗಿತ್ತು. ಮೂರು ವಿಭಿನ್ನ ರಾಜವಂಶಗಳು ಹಾಗೂ ಕಾಲಖಂಡಗಳಿಗೆ ಸೇರಿದ ಸಾಮಗ್ರಿಗಳು ಮೂರು ಪದರಗಳಲ್ಲಿ ನಡೆದ ಉತ್ಖನನಗಳಲ್ಲಿ ದೊರೆತಿವೆ. ಇಲ್ಲಿ ದೊರಕಿದ ಸಾಮಗ್ರಿಗಳು ಮತ್ತು ಸಮೀಪದಲ್ಲಿ ಲಭ್ಯವಾದ ಶಾಸನಗಳನ್ನು ಅಧ್ಯಯನ ಮಾಡಿದಾಗ ಅನೇಕ ಸಂಗತಿಗಳು ತಿಳಿದುಬಂದಿವೆ. ಈ ಪ್ರದೇಶದಲ್ಲಿ, ಮೆಗಾಲಿಥಿಕ್ ಮತ್ತು ನಿಯೋ ಲಿಥಿಕ್ ಯುಗಗಳಿಂದಲೂ ಮನುಷ್ಯ ವಸತಿ ಇತ್ತು. ಅನುಕ್ರಮವಾಗಿ, ಕದಂಬ, ಶಾತವಾಹನ ಮತ್ತು ಹೊಯ್ಸಳ ರಾಜವಂಶಗಳಿಗೆ ಸೇರಿದ ರಾಜರು ಇಲ್ಲಿ ನೆಲೆಸಿದ್ದರು. ಚಂದ್ರವಳ್ಳಿಯ ಪ್ರಾಚೀನತೆಯನ್ನು ಎರಡು ಸಾವಿರ ವರ್ಷಗಳಷ್ಟು ಹಿಂದೆ ತೆಗೆದುಕೊಂಡು ಹೋಗಲು, ಈ ಸಾಮಗ್ರಿಗಳು ನೆರವು ನೀಡಿವೆ.

          ಚಂದ್ರವಳ್ಳಿಯಲ್ಲಿ ದೊರೆತಿರುವ ವಸ್ತುಗಳಲ್ಲಿ ನಾಣ್ಯಗಳು ಪ್ರಮುಖವಾದವು. ಚುಟು ವಂಶದ ರಾಜರುಗಳು ಮತ್ತು ಕ್ರಿ.ಶ. ಮೂರನೆಯ ಶತಮಾನದಲ್ಲಿ ರಾಜಭಾರ ಮಾಡಿದ ಶಾತವಾಹನ ವಂಶದ ದೊರೆಗಳು ಟಂಕಿಸಿದ ಸೀಸದ ನಾಣ್ಯಗಳು ಇಲ್ಲಿ ಸಿಕ್ಕಿವೆ. ಸುಮಾರು ಮುಕ್ಕಾಲು ಅಂಗುಲ ದಪ್ಪವಿರುವ ಮಹಾರಥಿ ನಾಣ್ಯವು ಗಮನ ಸೆಳೆಯುತ್ತದೆ. ಮುದಾನಂದ, ಚುಟುಕುಲಾನಂದ ಎಂಬ ಹೆಸರುಗಳನ್ನು ಕೆತ್ತಲಾಗಿರುವ ನಾಣ್ಯಗಳನ್ನು ಟಂಕಿಸಿರುವವರು ಚುಟು ವಂಶದವರು. ನಿಯೋಲಿಥಿಕ್ ಯುಗಕ್ಕೆ ಸೇರಿದ ಜನರು ಬಳಸುತ್ತಿದ್ದ ಬೆಳ್ಳಿ, ಬಂಗಾರ ಮತ್ತು ತಾಮ್ರದ ನಾಣ್ಯಗಳು ಹೇರಳವಾಗಿ ಸಿಕ್ಕಿವೆ. ಇಲ್ಲಿ ಸಿಕ್ಕಿರುವ ಕೆಲವು ನಾಣ್ಯಗಳ ಮೇಲೆ, ಬೌದ್ಧರಿಗೆ ಸಂಬಂಧಿಸಿದ  ಬೋಧೀವೃಕ್ಷ, ಸ್ತೂಪ ಮತ್ತು ಚೈತ್ಯ ದೇವಾಲಯಗಳನ್ನು ಕಾಣಬಹುದು. ಒಂದು ಕಾಲದಲ್ಲಿ ಚಂದ್ರವಳ್ಳಿಯನ್ನು ಬೌದ್ಧರು ಆಳಿರಬಹುದೆಂಬ ಊಹೆಗೆ ಇವು ಎಡೆ ಮಾಡಿಕೊಡುತ್ತವೆ. ರೋಮನ್ ಮತ್ತು ಚೈನೀ ನಾಣ್ಯಗಳು, ಇಲ್ಲಿನವರಿಗೆ ಇದ್ದಿರಬಹುದಾದ ಸಾಗರೋತ್ತರ ಸಂಪರ್ಕಗಳ ಕಡೆಗೆ ಬೆರಳು ಮಾಡುತ್ತವೆ. {ರೋಮನ್ ಚಕ್ರವರ್ತಿಯಾದ ಅಗಸ್ಟಸ್ ಸೀಸರ್(ಟೈಬೀರಿಯಸ್?) ಮತ್ತು ಹಾನ್ ವಂಶದ ಚೈನೀ ಚಕ್ರವರ್ತಿ ವು ತಿ ಮುದ್ರಿಸಿದ ನಾಣ್ಯಗಳು ಇಲ್ಲಿ ದೊರೆತಿವೆ.} ಹೊಯ್ಸಳ ದೊರೆಯಾದ ವೀರಬಲ್ಲಾಳನು ಟಂಕಿಸಿರುವ ನಾಣ್ಯಗಳು ತೀರ ಮೇಲಿನ ಪದರದಲ್ಲಿಯೇ ಸಿಕ್ಕಿವೆ. ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯ ಮತ್ತು ಒಡೆಯರ ವಂಶದ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದ ನಾಣ್ಯಗಳೂ ಇಲ್ಲಿ ಕಾಣಿಸಿಕೊಂಡಿವೆ. ಮಾರ್ಟಿಮರ್ ವೀಲರ್ ಅವರು ಚಂದ್ರವಳ್ಳಿಯಲ್ಲಿ 55 ನಾಣ್ಯಗಳನ್ನು ಸಂಗ್ರಹಿಸಿದರು.

          ಇಲ್ಲಿ ಅನೇಕ ದಿನಬಳಕೆಯ ವಸ್ತುಗಳೂ ಸಿಕ್ಕಿವೆ. ಕೊಡಲಿ, ಮಾರ್ಟರ್, ಕಮ್ಮಾರನ ಕುಲುಮೆ, ಮಣ್ಣಿನ ಮತ್ತು ಲೋಹದ ಅಲಂಕಾರ ಸಾಮಗ್ರಿಗಳು ಇವುಗಳಲ್ಲಿ ಕೆಲವು. ಇಲ್ಲಿ ಲಭ್ಯವಾಗಿರುವ ಗಣೇಶ, ಆನೆ, ಹಸು, ಹುಂಜ, ನಗ್ನ ಮಹಿಳೆ ಮುಂತಾದ ಪ್ರತಿಮೆಗಳ ಪರಿಶೀಲನೆಯು ಚಂದ್ರವಳ್ಳಿಯ ಪ್ರಾಚೀನತೆಗೆ ಪುರಾವೆಗಳನ್ನು ಒದಗಿಸಿದೆ. ಇವಲ್ಲದೆ, ಮೆಗಾಲಿಥಿಕ್ ಯುಗಕ್ಕೆ ಸೇರಿದ ಮಡಕೆಗಳು, ವರ್ಣಲೇಪಿತವಾದ ಪಾತ್ರೆಗಳು ಮತ್ತು ತಟ್ಟೆಗಳು ಕೂಡ ಮುಖ್ಯವಾದ ಉತ್ಖನನಗಳೇ. ಅವುಗಳಿಗೆ ಕಾವಿಗೆಂಪು(ರಸೆಟ್) ಬಣ್ಣ ಹಾಕಲಾಗಿದೆ. ಅವುಗಳ ಮೇಲೆ ಅನೇಕ ಜಾಮಿತೀಯವಾದ(ಜಾಮಿಟ್ರಿಕಲ್) ರೇಖಾಚಿತ್ರಗಳಿವೆ. ಪಾತ್ರೆಗಳು ಕೂಡ ಬೇರೆ ಬೇರ ಆಕಾರಗಳಲ್ಲಿವೆ.

          ಇಲ್ಲಿ ಒಂದು ಶವಸಂಗ್ರಹಣ ಪೆಟ್ಟಿಗೆಯು(ಸಿಸ್ಟ್) ಸಿಕ್ಕಿದೆ. ಅದರೊಳಗೆ ಒಂದು ಅಸ್ಥಿಪಂಜರವಿತ್ತು. ಸಮೀಪದಲ್ಲಿಯೇ ಸಿಕ್ಕಿದ ಮಡಕೆಗಳಲ್ಲಿ ಮೂಳೆಗಳು ಮತ್ತು ಪ್ರಾಣಿಗಳ ಹಲ್ಲುಗಳು ಸಿಕ್ಕಿವೆ. ಒಂದಲ್ಲ ಒಂದು ಕಾಲದಲ್ಲಿ ಚಂದ್ರವಳ್ಳಿಯು, ಸಮಾಧಿಸ್ಥಳವಾಗಿತ್ತೆಂಬ(ಮಾರ್ಚುಯರಿ) ಊಹೆಗೆ ಇವು ಸಾಕ್ಷಿಯಾಗಿವೆ. 

          ಹತ್ತಿರದಲ್ಲಿಯೇ ಇರುವ ಬಂಡೆಯ ಮೇಲೆ, ಕದಂಬರ ಮಯೂರಶರ್ಮನ ಶಾಸನವನ್ನು ಕೆತ್ತಲಾಗಿದೆ. ಅಲ್ಲಿ ಅವನು ತನ್ನ ಹಲವು ವಿಜಯಗಳ ನೆನಪಿಗಾಗಿ ಒಂದು ಕೆರೆಯನ್ನು ನಿರ್ಮಿಸಿದನೆಂಬ ಸಂಗತಿಯನ್ನು ಆ ಶಾಸನವು ದಾಖಲೆ ಮಾಡುತ್ತದೆ. ಬ್ರಾಹ್ಮೀ ಲಿಪಿಯಲ್ಲಿರುವ ಈ ಶಾಸನದ ಕಾಲ ಕ್ರಿ.ಶ. 350.

          ಚಂದ್ರವಳ್ಳಿಗೆ ಸಮೀಪದಲ್ಲಿರುವ ಅಂಕ್ಳೆ ಗುಡ್ಡದಲ್ಲಿರುವ ಗವಿಗಳು ಕ್ರಿಸ್ತಪೂರ್ವ ಕಾಲಮಾನಕ್ಕೆ ಸೇರಿದವು. ಅಲ್ಲಿ ಸೆರೆಮನೆ ಕೋಣೆಗಳು, ಇಕ್ಕಟ್ಟಾದ ಓಣಿಗಳು ಮತ್ತು ಅಡಗುದಾಣಗಳನ್ನು ನೋಡಬಹುದು. ಆ ಗುಹೆಗಳಲ್ಲಿ ಬೌದ್ಧ ಮತ್ತು ಹಿಂದೂ ಪ್ರಭಾವಗಳಿಗೆ ಪಕ್ಕಾಗಿರುವ ಕಲ್ಲಿನ ಕೆತ್ತನೆಗಳು ಮತ್ತು ವರ್ಣಚಿತ್ರಗಳಿವೆ. ಅಷ್ಟೇ ಅಲ್ಲದೆ, ಇಲ್ಲಿ ಮಳೆಯ ನೀರನ್ನು ಸಂಗ್ರಹಿಸುವ ಉಪಾಯಗಳನ್ನೂ ಸೂಕ್ತವಾದ ಬೆಳಕಿನ ವ್ಯವಸ್ಥೆಯನ್ನೂ ಇಲ್ಲಿ ಗುರುತಿಸಬಹುದು.

          ಚಂದ್ರವಳ್ಳಿಯು ಕರ್ನಾಟಕದ ಪ್ರಾಚೀನ ಇತಿಹಾಸದ ಬಗ್ಗೆ ನಿರ್ವಿವಾದವಾದ ಪುರಾವೆಗಳನ್ನು ಒದಗಿಸುವ ಬಹು ಮುಖ್ಯವಾದ ಸ್ಥಳ.

 

ಮುಂದಿನ ಓದು ಮತ್ತು ಲಿಂಕುಗಳು:

1.      Brahmagiri and Chandravalli Wheeler, Mortimer, 1947, Pub. Archaeological Survey of India.

2.      Some Contributions of South India to Indian Culture, Aiyangar, S. Krishnaswami, Asian Educational Serveices.

3.      An Encyclopaedia of Indian Archaeology, Ghosh, Amalananda, 1990, Brill.

4.      Human Relations Area Files Inc, Encyclopaedia of Pre-history, Peter Neal Peregrine and Melvin Ember, 2001, Springer.

5.      ನಾಣ್ಯ ಕರ್ನಾಟಕ, ಹೆಚ್. ಖಂಡೋಬರಾವ್, 2002, ಶಿವಮೊಗ್ಗ.

6.      ಕರ್ನಾಟಕದಲ್ಲಿ ನಾಣ್ಯ ಮತ್ತು ನಾಣ್ಯಪದ್ಧತಿ, ಎ.ವಿ. ನರಸಿಂಹಮೂರ್ತಿ, 1997.

 

ಮುಖಪುಟ / ಪ್ರಮುಖ ಸ್ಥಳಗಳು