ಲಕ್ಕುಂಡಿ

        ಲಕ್ಕುಂಡಿಯು, ಉತ್ತರ ಕರ್ನಾಟಕದ ಜಿಲ್ಲಾಕೇಂದ್ರಗಳಲ್ಲಿ ಒಂದಾದ ಗದಗಿನಿಂದ ಸುಮಾರು ಹನ್ನೊಂದು ಕಿಲೋಮೀಟರುಗಳ ದೂರದಲ್ಲಿರುವ ಚಿಕ್ಕ ಊರು. ಇದಕ್ಕೆ ಸುದೀರ್ಘವೂ ವೈಭವಪೂರಿತವೂ ಆದ ಚರಿತ್ರೆಯಿದೆ. ಹಿಂದಿನ ಕಾಲದಲ್ಲಿ ಇದನ್ನು ಲೊಕ್ಕಿಯ ಗುಂಡಿ ಎಂದು ಕರೆಯುತ್ತಿದ್ದರು. ಹನ್ನೊಂದು ಮತ್ತು ಹನ್ನೆರಡನೆಯ ಶತಮಾನಗಳಲ್ಲಿ, ಇದು ಬೆಳುವೊಲನಾಡಿನ ಹದಿನೆಂಟು ಅಗ್ರಹಾರಗಳಲ್ಲಿ ಒಂದಾಗಿತ್ತು. ಬ್ರಾಹ್ಮಣರ ವಾಸಸ್ಥಾನವಾದುದರಿಂದ, ಲಕ್ಕುಂಡಿಯು ವೈದಿಕ ವಿದ್ವತ್ತಿಗೆ ಮತ್ತು ಸಿರಿವಂತಿಕೆಯಿಂದ ಕೂಡಿದ ಜೀವನಶೈಲಿಗೆ ಹೆಸರಾಗಿತ್ತು. ಬಹಳ ಪ್ರಬಲವಾದ ಲಕ್ಕುಂಡಿಯ ಕೋಟೆಯನ್ನು ವಶಪಡಿಸಿಕೊಳ್ಳಲು, ಸೇವುಣ ರಾಜವಂಶದ ದೊರೆಯಾದ ಭಿಲ್ಲಮನಿಗೂ ಹೊಯ್ಸಳರ ರಾಜನಾದ ಇಮ್ಮಡಿ ಬಲ್ಲಾಳನಿಗೂ ನಿರಂತರವಾದ ಕಲಹಗಳು ನಡೆಯುತ್ತಿದ್ದವು. ಪ್ರಸಿದ್ಧವಾದ ಸೊರಟೂರಿನ ಯುದ್ಧದಲ್ಲಿ, ಭಿಲ್ಲಮನನ್ನು ಸೋಲಿಸಿ, ಹಿಮ್ಮೆಟ್ಟಿಸಿದ ಬಲ್ಲಾಳನು, ಲಕ್ಕುಂಡಿಯನ್ನು ತನ್ನ ಉಪರಾಜಧಾನಿಯಾಗಿ ಮಾಡಿಕೊಂಡನು. ಹನ್ನೆರಡನೆಯ ಶತಮಾನದ ನಂತರ ಈ ನಗರವು ತನ್ನ ಮಹತ್ವವನ್ನು ಕಳೆದುಕೊಂಡಿತು. ಕಲ್ಯಾಣಿಯ ಚಾಲುಕ್ಯರ ಕಾಲದಲ್ಲಿ, ಲಕ್ಕುಂಡಿಯಲ್ಲಿ ಹೆಸರುವಾಸಿಯಾದ ಕಮ್ಮಟ(ಮಿಂಟ್) ಇತ್ತು. ಅನೇಕ ಶಾಸನಗಳಲ್ಲಿ, ಇಲ್ಲಿ ತಯಾರಾದ ಬಂಗಾರದ ನಾಣ್ಯಗಳನ್ನು 'ಪೊನ್ ಗದ್ಯಾಣ' ಎಂದು ಕರೆದಿದ್ದಾರೆ.

          ಲಕ್ಕುಂಡಿ ಮತ್ತು ದಾನ ಚಿಂತಾಮಣಿ ಅತ್ತಿಮಬ್ಬೆಯರ ನಡುವೆ ಬಹಳ ನಿಕಟವಾದ ಸಂಬಂಧವಿದೆ. ಇಲ್ಲಿರುವ ಪ್ರಸಿದ್ಧವಾದ ಬ್ರಹ್ಮಜಿನ ಆಲಯವನ್ನು ಅತ್ತಿಮಬ್ಬೆಯ ಉದಾರ ದಾನದಿಂದಲೇ ನಿರ್ಮಿಸಲಾಗಿದೆ. ಅಷ್ಟೇ ಅಲ್ಲ, ಆಕೆಯು ಚಾಲುಕ್ಯ ರಾಜನಾದ ಇರಿವ ಬೆಡಂಗ ಸತ್ಯಾಶ್ರಯನಲ್ಲಿ ಮನವಿ ಮಾಡಿಕೊಂಡು, ಆ ದೇವಾಲಯದಲ್ಲಿ ನಿರಂತರವಾಗಿ ಪೂಜೆ ಪುನಸ್ಕಾರಗಳನ್ನು ನಡೆಸಲು ಅಗತ್ಯವಾದ ಹಣಕಾಸಿನ ಸಹಾಯವನ್ನೂ ಪಡೆದಿದ್ದಳು.

          ಲಕ್ಕುಂಡಿಯಲ್ಲಿ, ಅದರ ಇತಿಹಾಸದ ಬೇರೆ ಬೇರೆ ಹಂತಗಳಲ್ಲಿ ಕಟ್ಟಲಾದ ಇಪ್ಪತ್ತಕ್ಕೂ ಹೆಚ್ಚು ದೇವಾಲಯಗಳಿವೆ. ಮಾಣಿಕೇಶ್ವರ, ವೀರಭದ್ರ, ಸೋಮೇಶ್ವರ, ನನ್ನೇಶ್ವರ ಮತ್ತು ಮಲ್ಲಿಕಾರ್ಜುನ ಗುಡಿಗಳು ಅವುಗಳಲ್ಲಿ ಹೆಸರಾದವು. ಇಲ್ಲಿ ದೊರೆತಿರುವ ಚಾಲುಕ್ಯ, ಹೊಯ್ಸಳ ಮತ್ತು ಕಳಚೂರ್ಯರ ಕಾಲಕ್ಕೆ ಸೇರಿದ ಶಾಸನಗಳು ಬೆಲೆಬಾಳುವ ಚಾರಿತ್ರಿಕ ಮಾಹಿತಿಯನ್ನು ನೀಡುತ್ತವೆ.

          ಲಕ್ಕುಂಡಿಯಲ್ಲಿರುವ ದೊಡ್ಡ ಜೈನ ದೇವಾಲಯವು, ಈ ಪ್ರದೇಶದಲ್ಲಿಯೇ, ಕ್ಲೋರಿಟಿಕ್ ರೂಪಾಂತರ ಶಿಲೆಯನ್ನು (ಮೆಟಾಮಾರ್ಫಿಕ್ ರಾಕ್ ಶಿಸ್ಟ್) ಬಳಸಿ ಕಟ್ಟಲಾದ ಮೊದಮೊದಲ ದೇವಾಲಯಗಳಲ್ಲಿ ಒಂದು. ಆ ಶಿಲೆಯ ಮೇಲ್ಮೆಯು ಬಹಳ ನುಣುಪಾಗಿ ಇರುತ್ತದೆ. ಅದುವರೆಗೆ. ಅಲ್ಲಿನ ದೇವಾಲಯಗಳಲ್ಲಿ ಮರಳುಕಲ್ಲನ್ನು(ಸ್ಯಾಂಡ್ ಸ್ಟೋನ್) ಬಳಸುತ್ತಿದ್ದರು. ಈ ಹೊಸ ಕಲ್ಲು, ಗಣಿಯಿಂದ ತೆಗೆದಾಗಲೇ ಅಷ್ಟೊಮದು ದಪ್ಪ ಇರುವುದಿಲ್ಲ. ಮತ್ತು ಅದನ್ನು ಇಷ್ಟ ಬಂದ ಆಕೃತಿಗೆ ಒಗ್ಗಿಸುವುದು ಸುಲಭ. ಈ ಗುಣಗಳು ಶಿಲ್ಪವಿಧಾನಗಳ ಮೇಲೆಯೂ ಪರಿಣಾಮ ಬೀರಿದವು. ಗಾರೆಕೆಲಸವು ಕಡಿಮೆಯಾಯಿತು ಹಾಗೂ ಕೆತ್ತನೆಗೆಲಸಗಳು ಹೆಚ್ಚು ಸೂಕ್ಷ್ಮವಾದವು. ಅಂತಹ ಕೆಲಸಗಳನ್ನು ಬಹಳ ತೃಪ್ತಿಕರವಾಗಿ ಮಾಡಿಮುಗಿಸಲು ಸಾಧ್ಯವಾಗುತ್ತಿತ್ತು. ಪ್ರಾಯಶಃ ಹನ್ನೊಂದನೆಯ ಶತಮಾನದ ಉತ್ತರಾರ್ಧದಲ್ಲಿ ಕಟ್ಟಿರಬಹುದಾದ ಈ ದೇವಾಲಯವು, ಐದು ಹಂತಗಳಿರುವ ವಿಮಾನವನ್ನು ಹೊಂದಿದೆ. ಇದು ಬುಡದಿಂದ ಶಿಖರದವರೆಗೆ ಚಚ್ಚೌಕದ ಆಕಾರವನ್ನು ಹೊಂದಿದೆ. ಮೊದಲು, ಇದರ ಮುಂಭಾಗದಲ್ಲಿ ಒಂದು ಆವೃತವಾದ ನವರಂಗವಿತ್ತು. ನಂತರ ಅದರ ಮುಂಭಾಗದಲ್ಲಿ ಮುಕ್ತವಾದ ಮಂಟಪವನ್ನು ಸೇರಿಸಲಾಗಿದೆ. ನವರಂಗದ ಕೇಂದ್ರಭಾಗವು ಅದರ ಸುತ್ತಲೂ ಇರುವ ಎಂಟು ಚೌಕಗಳಿಗಿಂತ ಹೆಚ್ಚು ವಿಶಾಲವಾಗಿದೆ. ಎರಡನೆಯ ಹಂತವು ಪಟ್ಟದಕಲ್ಲಿನ ದೇವಾಲಯದಲ್ಲಿರುವ ರಚನೆಯನ್ನು ಹೋಲುತ್ತದೆ. ಇದು ಹೆಚ್ಚು ನಿಯೋಗಾತ್ಮಕವಾಗಿದ್ದು,(ಫಂಕ್ಷನಲ್) ಇದರಲ್ಲಿ ಒಂದು ಅಂತರಾಳ ಮಂಟಪವಿದೆ. ಈ ಮಂಟಪವು ಒಟ್ಟು ವಿಮಾನದ ಎತ್ತರವನ್ನು ಸಾಕಷ್ಟು ಹೆಚ್ಚಿಸುತ್ತದೆ. ಮೇಲಿನ ಮೂರು ಹಂತಗಳು ಕೇವಲ ಸಾಂಕೇತಿಕವಾಗಿದ್ದು, ಅವುಗಳ ಮುಂದೆ ಸುಕ-ನಾಸಿಕವನ್ನು ಜೋಡಿಸಿದೆ. ಚಾವಣಿಯ ಮೇಲುಭಾಗದ ಅಂಚುಗಳು,(ಕಾರ್ನೀಸಸ್) ಸಿಂಹಮುಖದ ಮುಖವಾಡ-ಅಲಂಕಾರಗಳಿಂದ(ಕುಡು-ಆರ್ನಮೆಂಟ್ಸ್) ಅಲಂಕೃತವಾಗಿವೆ. ಅವು, ಚಪ್ಪಟೆಯಾಗಿದ್ದರೂ ಕಮಾನಿನ ಆಕಾರವನ್ನು ಉಳಿಸಿಕೊಂಡಿವೆ. ಗೋಡೆಯ ಮೇಲೆ ಕೆತ್ತಿರುವ ಮುಂಚಾಚುವ ಕಂಬಗಳು(ಪಿಲಾಸ್ಟರ್ಸ್) ಬಹಳ ಕೋಮಲವಾಗಿವೆ. ಅಂತಹ ಪಿಲಾಸ್ಟರುಗಳ ಜೋಡಿಯ ನಡುವೆ, ಎತ್ತರವಾದ ನಾಸಿಕ-ಮುಖಗಳಿವೆ. ಬಿಡುವು-ಜಾಗಗಳಲ್ಲಿ ಅಲಂಕಾರಗೊಂಡ ಪಿಲಾಸ್ಟರುಗಳನ್ನು ನೋಡಬಹುದು. ಇದು ತನಗೆ ಸಮಕಾಲೀನವಾದ ಚೋಳ ಶೈಲಿಯನ್ನು ಹೋಲುತ್ತದೆ. (ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾದ ವೆಬ್ ಸೈಟಿನಿಂದ ಸಂಗ್ರಹಿಸಿದ ಮಾಹಿತಿ)

          ಲಕ್ಕುಂಡಿಯಲ್ಲಿರುವ ಕಾಶಿ ವಿಶ್ವನಾಥನ ದೇವಾಲಯವು, ಹೊಯ್ಸಳಶಿಲ್ಪದ ವೈಭವಕ್ಕೆ ಸಾಕ್ಷಿಯಾಗಿದೆ. ಇದು ಚೋಳ ರಾಜರುಗಳ ಆಕ್ರಮಣಕ್ಕೆ ಸಿಕ್ಕು ಜೀರ್ಣವಾಗಿದೆ. ಇಲ್ಲಿನ ಚಾವಣಿಯ ಮೇಲಿರುವ ಶಾಸನಗಳಿಂದ ತಿಳಿದು ಬರುವ ಮಾಹಿತಿಯ ಪ್ರಕಾರ, ಒಂದು ಕಾಲದಲ್ಲಿ, ಇಲ್ಲಿನ ದೇವರನ್ನು ಕವತಾಳೇಶ್ವರ ಎಂದು ಕರೆಯುತ್ತಿದ್ದರು. ಇದರ ಹೊರ ಗೋಡೆಗಳ ಮೇಲೆ ರಾಮಾಯಣದ ಕಥೆಯನ್ನು ನಿರೂಪಿಸುವ ಕೆಲವು ಕೆತ್ತನೆಗಳಿವೆ.

          ಈಗಾಗಲೇ ಹೇಳಿದಂತೆ ಬ್ರಹ್ಮಜಿನಾಲಯವೇ ಇಲ್ಲಿನ ಪ್ರಮುಖ ಆಕರ್ಷಣೆ. ಇಲ್ಲಿನದು ಕಲ್ಯಾಣಿಯ ಚಾಲುಕ್ಯರ ಕಾಲದ ವಾಸ್ತುಶಿಲ್ಪ. ತೀರ್ಥಂಕರ ಮಹಾವೀರನ ವಿಗ್ರಹವು ಈಗ ಭಿನ್ನವಾಗಿದೆ. ಗರ್ಭಗುಡಿಯ ಎರಡೂ ಪಕ್ಕಗಳಲ್ಲಿ ಬ್ರಹ್ಮ ಮತ್ತು ಸರಸ್ವತಿಯರ ಪ್ರತಿಮೆಗಳಿವೆ. ಪಾರ್ಶ್ವನಾಥಬಸದಿಯು ಲಕ್ಕುಂಡಿಯಲ್ಲಿರುವ ಇನ್ನೊಂದು ಜಿನಾಲಯ. ಲಕ್ಕುಂಡಿಯಲ್ಲಿ ಅನೇಕ ಬಾವಿಗಳಿವೆ. ಇವು ತಮ್ಮ ವಾಸ್ತುರಚನೆ ಮತ್ತು ಕೆತ್ತನೆಗಳಿಗಾಗಿ ಹೆಸರುವಾಸಿಯಾಗಿವೆ. ಅವುಗಳಲ್ಲಿ ಮುಸುಕಿನ ಬಾವಿ ಮತ್ತು ಕನ್ನೆ ಬಾವಿಗಳು ಹೆಸರುವಾಸಿಯಾದವು. ಈ ಬಾವಿಗಳ ಗೋಡೆಗಳ ಮೂಲೆಗಳಲ್ಲಿ ಚಿಕ್ಕ ಶಿವಾಲಯಗಳನ್ನು ಕೆತ್ತಲಾಗಿದೆ.

          ಲಕ್ಕುಂಡಿಯ ವಾಸ್ತುವೈಭವ ಮತ್ತು ಶಿಲ್ಪಕಲಾಸೌಂದರ್ಯಗಳು ಅಷ್ಟೊಂದು ಪ್ರಸಿದ್ಧವಾಗದೆ ಇರುವುದು ವಿಷಾದಕರ.

 

ಮುಂದಿನ ಓದು ಮತ್ತು ವಿದ್ಯುನ್ಮಾನ ಲಿಂಕುಗಳು:

       1. Lakkundi - Wikipedia, the free encyclopedia

               2. Monuments in Lakkundi

       3. www.jainheritagecentres.com> Jainism In India> Karnataka> Lakkundi

ಮುಖಪುಟ / ಪ್ರಮುಖ ಸ್ಥಳಗಳು